ಚಾಲ್ರ್ಸ್ (ಸ್ವೀಡನಿನ ದೊರೆಗಳು)-

ಚಾಲ್ರ್ಸ್ IX : 1550-1611. ಸ್ವೀಡನ್ ದೊರೆ ಗಸ್ಟೇವಸ್ ವಾಸನ ಮಗ. ಒಂಬತ್ತನೆಯ ಚಾಲ್ರ್ಸನೂ ಇವನ ಅನಂತರ ದೊರೆಗಳಾದ ಎರಡನೆಯ ಗಸ್ಟೇವಸ್, 10ನೆಯ ಚಾಲ್ರ್ಸ್ ಇವರೂ ಸ್ವೀಡನನ್ನು ಘನತೆಯ ರಾಷ್ಟ್ರವನ್ನಾಗಿ ಪರಿವರ್ತಿಸಿದರು. ತಂದೆಯ ಇಚ್ಛೆಯಂತೆ ಈತ ಸಾಡರ್ಮನ್‍ಲೆಂಡಿನ ಡ್ಯೂಕ್ ಆಗಿದ್ದ. ತನ್ನ ಮಲ ಅಣ್ಣ 14ನೆಯ ಎರಿಕನ ವಿರುದ್ಧ ಬಂಡಾಯ ಹೂಡಿ ಅವನನ್ನು ಇಳಿಸಿ ಅಣ್ಣ 3ನೆಯ ಜಾನನನ್ನು ಸಿಂಹಾಸನದ ಮೇಲೆ ಕೂರಿಸಿದ. ಆದರೆ ಜಾನನಿಗೂ ಚಾಲ್ರ್ಸನಿಗೂ ಕ್ರಮೇಣ ವಿರಸ ಬೆಳೆಯಿತು. ಅವನ ಮಗ ಸಿಗಿಸ್‍ಮಾಂಡ್ ರಾಜನಾದಾಗಲೂ ಈ ವಿರಸ ಮುಂದುವರಿಯಿತು. ಅವರ ವಿರುದ್ಧ ಬಂಡಾಯ ಮಾಡಿದ. 1595ರಲ್ಲಿ ಈತ ರಾಜ್ಯ ರಕ್ಷಕನೆಂದು ನೇಮಿಸಲ್ಪಟ್ಟು, ಮುಂದೆ 1604ರಲ್ಲಿ ರಾಜನೆಂದು ಮಾನ್ಯತೆ ಪಡೆದ. ಪೋಲೆಂಡಿನ ವಿರುದ್ಧ ಸ್ವೀಡನ್ ನಡೆಸಿದ ದೀರ್ಘ ಯುದ್ಧ (1600-60) ಆರಂಭವಾದ್ದು ಇವನ ಕಾಲದಲ್ಲೇ. ಫಿನ್ಲೆಂಡ್, ಪೋಲೆಂಡ್, ಡೆನ್ಮಾರ್ಕ್, ರಷ್ಯಗಳ ವಿರುದ್ಧ ಇವನು ನಡೆಸಿದ ಯುದ್ಧಗಳೆಲ್ಲ ಅಪಯಶಸ್ಸಿಗೆ ಕಾರಣವಾದುವು. ಆದರೆ ತನ್ನ ತಂದೆ ಆರಂಭಿಸಿದ ಒಂದು ಬಲಶಾಲಿ ಹಾಗು ಪ್ರಾಟೆಸ್ಟಂಟ್ ರಾಜ್ಯವನ್ನು ಕಟ್ಟುವ ಕಾರ್ಯವನ್ನು ಈತ ಯಶಸ್ವಿಯಾಗಿ ಮುಂದುವರಿಸಿದ.

ಚಾಲ್ರ್ಸ್ X : 1654-1660ರಲ್ಲಿ ಸ್ವೀಡನ್ನಿನ ದೊರೆಯಾಗಿದ್ದ. ಇವನು ಗಸ್ಟೇವಸ್ ಅಡಾಲ್ಫಸನ ಸೋದರಿಯ ಮಗ. ಜನನ 1622ರಲ್ಲಿ. ಸ್ವೀಡನ್ನಿನ ರಾಣಿ ಕ್ರಿಸ್ಟಿಯಾನ ಈತನನ್ನು ತನ್ನ ಉತ್ತರಾಧಿಕಾರಿಯೆಂದು 1649ರಲ್ಲಿ ಘೋಷಿಸಿದಳು. 1654ರಲ್ಲಿ ಕ್ರಿಸ್ಟಿಯಾನ ಕಿರೀಟತ್ಯಾಗ ಮಾಡಿದಾಗ ಈತ ರಾಜನಾದ. ತನ್ನ ಅಲ್ಪಕಾಲದ ಆಡಳಿತದಲ್ಲಿ ಪೋಲೆಂಡಿನ ಮೇಲೆ ಯುದ್ಧ ನಡೆಸಿ ಅದರ ರಾಜಧಾನಿಯನ್ನು ಗೆದ್ದು, ಮುಂದೆ ಡೆನ್ಮಾರ್ಕನ್ನು ಸೋಲಿಸಿ ಯೂರೋಪಿನಲ್ಲೆಲ್ಲ ಗಾಬರಿ ಹುಟ್ಟಿಸಿದ, ಯುದ್ಧ ಮುಂದುವರಿಸಬೇಕೆಂಬ ಹುಮ್ಮಸ್ಸಿನಲ್ಲಿನಲ್ಲಿದ್ದಾಗಲೇ ತೀರಿಕೊಂಡ.

ಚಾಲ್ರ್ಸ್ XI : 1660ರಿಂದ  1697ರ ವರೆಗೆ ಸ್ವೀಡನ್ನನ್ನಾಳಿದ ಈತ 10ನೆಯ ಚಾಲ್ರ್ಸನ ಒಬ್ಬನೇ ಮಗ. ಜನನ 1655. ತಂದೆ ತೀರಿಕೊಂಡಾಗ ಈತ ನಾಲ್ಕು ವರ್ಷಗಳ ಬಾಲಕ್ಷೇತ್ರ 10ನೆಯ ಚಾಲ್ರ್ಸ್ ಸಾಯುವ ಮುನ್ನ ರಾಣಿಯ ಅಧ್ಯಕ್ಷತೆಯಲ್ಲಿ ಐದು ಮಂತ್ರಿಗಳ ರಾಜ್ಯರಕ್ಷಣಾ ಮಂಡಳಿಯನ್ನು ನೇಮಿಸಿದ್ದ. ಆದರೆ ಬಾಲರಾಜನಿಗೆ ಯೋಗ್ಯ ಶಿಕ್ಷಣ ದೊರಕಲಿಲ್ಲ. ಆಗ ಸ್ವೀಡನ್ ಫ್ರಾನ್ಸಿನ ಉಸ್ತುವಾರಿಗೆ ಒಳಪಟ್ಟಿತ್ತು. 1675ರಲ್ಲಿ ಡೆನ್ಮಾರ್ಕ್ ಸ್ವೀಡನ್ನಿನ ಮೇಲೆ ದಂಡೆತ್ತಿ ಬಂದಾಗ ಈ ಎಳೆಯನೇ ನಾಯಕತ್ವ ವಹಿಸಿ ಡೆನ್ಮಾರ್ಕಿನ ಸೇನೆಯನ್ನು ಪೂರ್ತಿ ಸೋಲಿಸಿ ಓಡಿಸಿದ (1678). ಮುಂದೆ ಡೆನ್ಮಾರ್ಕಿನೊಂದಿಗೆ ಸ್ನೇಹ ಬೆಳೆಸಿ, ಅಲ್ಲಿಯ ದೊರೆಯ ಸೋದರಿ ಆಲ್ರಿಕಾ ಲಿಯೊನಾರಾಳನ್ನು ಮದುವೆಯಾದ. ಬ್ರಾಂಡೆನ್‍ಬರ್ಗ್, ಫ್ರಾನ್ಸ್‍ಗಳ ಜೊತೆಗೂ ಒಪ್ಪಂದ ಮಾಡಿಕೊಂಡ. ಒಳಾಡಳಿತದ ಎಲ್ಲ ಶಾಖೆಗಳನ್ನೂ ತೀವ್ರವಾಗಿ ಸುಧಾರಿಸಿ ಸ್ವೀಡನ್ನಿಗೆ ಹೊಸ ರೂಪ ಕೊಟ್ಟ. ವೀರನೂ ವಿದ್ಯಾಪಕ್ಷಪಾತಿಯೂ ಅಸಾಧಾರಣ ಆಡಳಿತಗಾರನೂ ಆದ ಚಾಲ್ರ್ಸ್ ಸ್ವೀಡನ್ನಿನ ಗಣ್ಯ ದೊರೆ. 42ನೆಯ ವಯಸ್ಸಿನಲ್ಲಿ ಈತ ತೀರಿಕೊಂಡಾಗ ಇವನ ಮಗ 12ನೆಯ ಚಾಲ್ರ್ಸನಿಗೆ ಪಟ್ಟವಾಯಿತು.

ಚಾಲ್ರ್ಸ್ XII : ಹನ್ನೊಂದನೆಯ ಚಾಲ್ರ್ಸನ ಒಬ್ಬನೇ ಮಗ. 1697-1718ರಲ್ಲಿ ಸ್ವೀಡನ್ನನ್ನಾಳಿದ. ಜನನ 1682. ಈತ ಪಟ್ಟಕ್ಕೆ ಬಂದಾಗ ಇವನಿಗೆ ಕೇವಲ 15 ವರ್ಷ. ಈತನ ರಾಜ್ಯದ ಮೇಲೆ ದಾಳಿ ನಡೆಸಲು ಡೆನ್ಮಾರ್ಕ್, ಪೋಲೆಂಡ್, ರಷ್ಯ ಮತ್ತು ಪ್ರಷ್ಯಗಳು ಸಂಚು ನಡೆಸಿ ಒಪ್ಪಂದ ಮಾಡಿಕೊಂಡುವು. ಎಳೆಯ ರಾಜ ಈ ದೇಶಗಳ ಸಂಚನ್ನು ಮೊದಲೇ ತಿಳಿದುಕೊಂಡು, ಅವರೆಲ್ಲ ಅಚ್ಚರಿಪಡುವಂತೆ 1799ರಲ್ಲಿ ಡೆನ್ಮಾರ್ಕಿಗೆ ನುಗ್ಗಿ ಅಲ್ಲಿಯ ರಾಜನನ್ನು ಸೋಲಿಸಿ ಯುದ್ಧ ಪರಿಹಾರ ಪಡೆದ. ಮುಂದೆ ನಾರ್ವಾದಲ್ಲಿ ರಷ್ಯನ್ನರನ್ನು ಸೋಲಿಸಿ, ಲಿವೋನಿಯವನ್ನು ಮುತ್ತಿದ ಪೋಲರನ್ನೂ ಲಿತುವೇನಿಯದಿಂದ ರಷ್ಯನ್ನರನ್ನೂ ಗೆದ್ದು ಅಲ್ಲಿಯ ದೊರೆಯನ್ನು ಪದಚ್ಯುತಗೊಳಿಸಿ ಸ್ಟ್ಯಾನಿಸ್ಲಸ್ ಲಿಸ್ಜಿನ್‍ಸ್ಕಿ ಎಂಬ ಕೈಗೊಂಬೆ ರಾಜನನ್ನು ಅಲ್ಲಿ ಸ್ಥಾಪಿಸಿದ (1704). ಮುಂದೆ ರಷ್ಯದ ರಾಜಧಾನಿ ಮಾಸ್ಕೋವನ್ನು ಗೆಲ್ಲಬೇಕೆಂದು ದಂಡಯಾತ್ರೆ ನಡೆಸಿ, ರಷ್ಯದ ಭೀಕರ ಚಳಿಯಲ್ಲಿ ತನ್ನ ಸೇನೆಯ ಬಹುಭಾಗವನ್ನು ಕಳೆದುಕೊಂಡ. ಪೋಲ್ಟಾವದಲ್ಲಿ ರಷ್ಯನ್ನರ ಕೈಯಲ್ಲಿ ಸೋತು (1709), ತನ್ನ ಸೇನೆಯನ್ನು ಕಳೆದುಕೊಂಡು ತುರ್ಕಿಯನ್ನು ಪ್ರವೇಶಿಸಿದ. ಮುಂದೆ ಐದು ವರ್ಷಗಳ ಅನಂತರ ಸ್ವೀಡನ್ನಿಗೆ ಮರಳಿದ. ಈ ಕಾಲದಲ್ಲಿ ತನ್ನ ವಿರುದ್ಧ ಏರ್ಪಟ್ಟಿದ್ದ ರಷ್ಯ. ಡೆನ್ಮಾರ್ಕ್, ಬ್ರಿಟನ್, ಹ್ಯಾನೋವರ್, ಪೋಲೆಂಡ್‍ಗಳ ಒಕ್ಕೂಟವನ್ನು ಮುರಿಯಲು ನಾರ್ವೆಯ ಮೇಲೆ ದಂಡೆತ್ತಿ ನಡೆದು, ಯುದ್ಧದಲ್ಲಿ ಗುಂಡು ತಗುಲಿ ಮರಣ ಹೊಂದಿದ.

ಚಾಲ್ರ್ಸ್ XIII : 1810-1818ರಲ್ಲಿ ಸ್ವೀಡನ್ನಿನ ದೊರೆಯಾಗಿದ್ದ, ಜನನ 1748. ಅಡಾಲ್ಫಸ್ ಫ್ರೆಡರಿಕನ ಎರಡನೆಯ ಮಗ, ವಾಸ ವಂಶದ ಕೊನೆಯ ದೊರೆ, ತನ್ನ ಅಣ್ಣನಾದ ದೊರೆ 3ನೆಯ ಗಸ್ಟೇವಸ್ ತೀರಿಕೊಂಡಾಗ (1789) ರಾಜರಕ್ಷಕನಾಗಿ ಏಳು ವರ್ಷ ಕಾರ್ಯ ನಿರ್ವಹಿಸಿದ. ಮುಂದೆ 1810ರಲ್ಲಿ 4ನೆಯ ಗಸ್ಟೇವಸನ ಅನಂತರ ರಾಜನಾಗಿ ಆಯ್ಕೆಯಾದ. ಇದೇ ಕಾಲಕ್ಕೆ ಸ್ವೀಡನ್ನಿಗೆ ಬಂದ ನೆಪೋಲಿಯನ್ನನ ಸೇನಾನಿ ಬರ್ನಾಡಾಟನನ್ನು ತನ್ನ ಉತ್ತರಾಧಿಕಾರಿಯಾಗಿ ಸ್ವೀಕರಿಸಿದ. 1814ರಲ್ಲಿ ನಾರ್ವೇ-ಸ್ವೀಡನ್‍ಗಳ ಸಂಯುಕ್ತ ರಾಜನಾದ. ಇವನ ಕಾಲದಲ್ಲಿ ಬರ್ನಾಡಾಟನೇ ಆಡಳಿತ ನೋಡಿಕೊಳ್ಳುತ್ತಿದ್ದು ಈತ ಹೆಸರಿಗೆ ಮಾತ್ರ ರಾಜನಾಗಿದ್ದ.

ಚಾಲ್ರ್ಸ್ XIV : 1818-1844ರಲ್ಲಿ ಸ್ವೀಡನ್ನಿನ ದೊರೆಯಾಗಿದ್ದ. ಫ್ರೆಂಚ್ ಮೂಲದ ನೇಕಾರರ ಕುಟುಂಬದಲ್ಲಿ ಜನನ (1763), 1780ರಲ್ಲಿ ಫ್ರೆಂಚ್ ಸೇನೆಯಲ್ಲಿ ಸೇರಿ ಮುಂದೆ ಸೇನಾಧಿಕಾರಿಯಾದ. ಕ್ರಾಂತಿಕಾರಿ ಸೇನೆಯಲ್ಲೂ ಅಧಿಕಾರಿಯಾಗಿದ್ದ. ನೆಪೋಲಿಯನ್ನನ ಕೈಕೆಳಗೆ ಮಹತ್ತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ. 1810ರಲ್ಲಿ ಸ್ವೀಡನ್ನಿನ ಆಡಳಿತಗಾರನಾಗಲು ಕರೆ ಬಂದಾಗ ಅಲ್ಲಿಗೆ ತೆರಳಿದ. ಅಲ್ಲಿಯ ದೊರೆ 13ನೆಯ ಚಾಲ್ರ್ಸ್ ಈತನನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ. ಬರ್ನಾಡಾಟ್ ಎಂಬ ಹೆಸರು ಹೊಂದಿದ್ದ ಈತ ಚಾಲ್ರ್ಸ್ ಜಾನ್ ಎಂಬ ಹೆಸರು ತಳೆದ. ಶೀಘ್ರವೇ ಈತನಿಗೂ ನೆಪೋಲಿಯನ್ನನ ಶತ್ರುಗಳಿಗೂ ಸ್ನೇಹ ಬೆಳೆದು. ಈ ಸ್ನೇಹ ನೆಪೋಲಿಯನ್ನನ ಸೋಲಿಗೂ ಕಾರಣವಾಯಿತು. 1814ರಲ್ಲಿ ನಾರ್ವೆ ಸ್ವೀಡನ್ನಿಗೆ ಸೇರಿತು. 1818ರಲ್ಲಿ 13ನೆಯ ಚಾಲ್ರ್ಸ್ ತೀರಿಕೊಂಡಾಗ ಇವನು ಕಿರೀಟಧಾರಣೆ ಮಾಡಿಕೊಂಡ. ಇವನ ಕಾಲದಲ್ಲಿ ನಾರ್ವೆ ಸ್ವೀಡನ್‍ಗಳ ಆಡಳಿತ ಸುಧಾರಿಸಿತು. ಅರ್ಥವ್ಯವಸ್ಥೆ ಭದ್ರವಾಯಿತು. ಶಿಕ್ಷಣವ್ಯವಸ್ಥೆ ವಿಸ್ತರಿಸಿತು. ಈತ ತೀರಿಕೊಂಡಾಗ ನಾರ್ವೆ ಮತ್ತು  ಸ್ವೀಡನ್‍ಗಳು ಬಲಿಷ್ಠವಾದ, ಸಮೃದ್ಧವಾದ ಮತ್ತು ಜನಭರಿತವಾದ ರಾಜ್ಯಗಳಾಗಿದ್ದುವು. ಈತನ ವಂಶಜರು ಅಲ್ಲಿ ಭದ್ರವಾಗಿ ಆಳ್ವಿಕೆ ಮುಂದುವರಿಸಿದರು.

ಚಾಲ್ರ್ಸ್ XV : ಸ್ವೀಡನ್ ಹಾಗೂ ನಾರ್ವೆಯ ದೊರೆ (1859-72). ನಾರ್ವೆಯ ದೊರೆ 1ನೆಯ ಆಸ್ಕರನ ಮಗ. ಜನನ 1826. ಬಹುಮುಖವಾದ ಹಾಗೂ ದೀರ್ಘಗಾಮಿಯಾದ ಸುಧಾರಣೆಗಳಿಂದಾಗಿ ಇವನ ಆಡಳಿತ ಖ್ಯಾತವಾಗಿದೆ. ಸ್ವೀಡನ್ನಿನ ಕಾನೂನುಗಳನ್ನು ಈತ ಪ್ರಗತಿಪರವಾಗಿ ಬದಲಾಯಿಸಿದ. ಶಾಸನ ಸಭೆ ಸುಧಾರಣೆಗೊಂಡಿತು. ಎರಡೂ ರಾಜ್ಯಗಳಲ್ಲೂ ಜನಪ್ರಿಯನಾಗಿದ್ದ ಈತ ಚಿತ್ರಕಾರನೂ ಕವಿಯೂ ಆಗಿದ್ದ. 						(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ